ಟ್ರೈಲೊಬೈಟ
	ನಿರ್ವಂಶವಾಗಿರುವ ಸಂಧಿಪದಿಗಳ (ಆತ್ರ್ರಾಪೊಡ) ಗುಂಪಿನ ಒಂದು ವರ್ಗ. ಪೇಲಿಯೊeóÉೂೀಯಿಕ್ ಯುಗದ ಕೇಂಬ್ರಿಯನ್. ಆರ್ಡೊವಿಸಿಯನ್ ಮತ್ತು ಸೈಲೂರಿಯನ್ ಕಲ್ಪಗಳ ಶಿಲೆಗಳಲ್ಲಿ ಈ ವರ್ಗದ ಪ್ರಾಣಿಗಳ ಫಾಸಿಲುಗಳು ಸಿಕ್ಕಿವೆ. ಅತ್ಯಂತ ಪ್ರಾಚೀನಕಾಲದ ಫಾಸಿಲುಗಳಲ್ಲಿ ಇವು ಕೂಡ ಸೇರಿವೆ. ಆರ್ಡೊವಿಸಿಯನ್ ಮತ್ತು ಸೈಲೂರಿಯನ್ ಕಲ್ಪಗಳಲ್ಲಿ ಅತ್ಯಂತ ಹೇರಳಸಂಖ್ಯೆಯಲ್ಲಿದ್ದುವು. ಬರಬರುತ್ತ ನಿರ್ವಂಶವಾಗುತ್ತ ಬಂದು ಪರ್ಮಿಯನ್ ಕಲ್ಪದ ವೇಳೆಗೆ ಕೇವಲ 3 ಪ್ರಭೇದಗಳು ಮಾತ್ರ ಉಳಿಯುವಂತಾದವು.

	ಟ್ರೈಲೊಬೈಟ್ ಪ್ರಾಣಿಗಳ ದೇಹದ ಉದ್ದಕ್ಕೂ ಎರಡು ಹಳ್ಳಗಳಿರುವುದರಿಂದ ದೇಹದಲ್ಲಿ ಮೂರು ತೆವರುಗಳನ್ನು (ಲೋಬ್ಸ್) ಕಾಣಬಹುದು. ಆದ್ದರಿಂದಲೇ ಇವಕ್ಕೆ ಟ್ರೈಲೊಬೈಟ್ಸ್ ಎಂಬ ಹೆಸರು ಕೊಡಲಾಗಿದೆ. ದೇಹದಲ್ಲಿ ತಲೆ, ಎದೆ ಮತ್ತು ಪಿಜಿಡಿಯಮ್ ಎಂಬ ಮೂರು ಭಾಗಗಳನ್ನು ಗುರುತಿಸಬಹುದು. ಎಲ್ಲ ಭಾಗಗಳೂ ಉಂಗುರಗಳಂತಿರುವ ಖಂಡಗಳಿಂದ ರಚಿತವಾಗಿದೆ. ತಲೆಯಲ್ಲಿ ಐದು ಖಂಡಗಳುಂಟು. ಇವೆಲ್ಲವೂ ಪರಸ್ಪರ ಕೂಡಿಕೊಂಡು ಗಟ್ಟಿಯಾದ ಒಂದು ಪೊರೆಯಿಂದ ಆವೃತವಾಗಿವೆ. ಈ ಪೊರೆಗೆ ಶಿರಕವಚ ಎಂದು ಹೆಸರು. ಶಿರಕವಚದ ಮೇಲ್ಭಾಗದಲ್ಲಿಯೂ ಮೂರು ತವರುಗಳುಂಟು. ಮಧ್ಯದ ತೆವರು. ಪಕ್ಕತೆವರುಗಳಿಗಿಂತ ಹೆಚ್ಚು ಉಬ್ಬಿಕೊಂಡಿದೆ. ಮಧ್ಯತೆವರನ್ನು ಗ್ಲಾಬೆಲ ಎಂದೂ ಪಕ್ಕತೆವರುಗಳನ್ನು ಕೆನ್ನೆತೆವರುಗಳು (ಫ್ರೀ ಚೀಕ್ಸ್) ಎಂದೂ ಕರೆಯಲಾಗುವುದು. ಕೆನ್ನೆತೆವರುಗಳು ತ್ರಿಕೋನಾಕಾರದವು. ಇವುಗಳ ಹಿಮ್ಮೂಲೆ ಗುಂಡಾಗಿರಬಹುದು ಇಲ್ಲವೆ ಉದ್ದವಾದ ಮುಳ್ಳಿನಂತೆ ಚಾಚಿಕೊಂಡಿರಬಹುದು. ಈ ಮುಳ್ಳಿಗೆ ಗೀನಲ್‍ಸ್ಪೈನ್ ಎಂದು ಹೆಸರು. ಪ್ರತಿ ಕೆನ್ನೆತೆವರಿನ ಒಳಭಾಗ ಅಚಲಿತವಾಗಿದೆಯಾದರೆ ಹೊರಭಾಗ ಚಲಿಸಬಲ್ಲದು. ಇವೆರಡು ಭಾಗಗಳೂ ಒಂದಕ್ಕೊಂದು ಹೊಲಿದಂತೆ ಸೇರಿಕೊಂಡಿವೆ. ಈ ಸೇರುವಿಕೆಯ ಮಧ್ಯಭಾಗದಲ್ಲಿ ಒಂದು ತಿರುವು ಇದ್ದು ಇದರಲ್ಲಿ ಚಲಿತ ತೆವರಿಗೆ ಹೊಂದಿಕೊಂಡಂತಿರುವ ಒಂದು ಸಂಯುಕ್ತನೇತ್ರ ಉಂಟು.

	ಎದೆಯಲ್ಲಿರುವ ಖಂಡಗಳು ಬಿಡಿಬಿಡಿಯಾಗಿದ್ದು ಒಂದರ ಮೇಲೊಂದು ಚಲಿಸುವಂತಿವೆ. ಕ್ಯಾಲಿಮೀನ್ ಎಂಬ ಜಾತಿಯ ಟ್ರೈಲೊಬೈಟ್‍ಗಳು ಅಪಾಯ ಒದಗಿದಾಗ ತಮ್ಮನ್ನು ರಕ್ಷಿಸಿಕೊಳ್ಳಲು ದೇಹವನ್ನು ಸುರುಳಿ ಸುತ್ತಿಕೊಳ್ಳುತ್ತಿದ್ದುವು. ಎದೆಯಲ್ಲೂ ಮೂರು ತೆವರುಗಳುಂಟು. ಅಂತೆಯೇ ಮಧ್ಯತೆವರು ಪಕ್ಕದ ತೆವರುಗಳಿಗಿಂತ ಹೆಚ್ಚು ಉಬ್ಬಿದೆ. ಕೆಲವು ಜಾತಿಗಳಲ್ಲಿ ಪಕ್ಕದ ತೆವರುಗಳ ಉದ್ದಕ್ಕೂ ಒಂದು ಚಿಕ್ಕ ಹಳ್ಳ ಅಥವಾ ಚಿಕ್ಕ ತೆವರು ಇರುವುದುಂಟು. ಮತ್ತೆ ಕೆಲವರಲ್ಲಿ ಎರಡು ತೆರನ ತೆವರುಗಳಿರುವುವು. ಇನ್ನೂ ಕೆಲವಲ್ಲಿ ತೆವರುಗಳೇ ಇಲ್ಲದೆ ದೇಹ ನುಣುಪಾಗಿ ಇರುವುದೂ ಉಂಟು. ಪಕ್ಕದ ತೆವರುಗಳ ಅಂಚು ಗುಂಡಾಗಿರಬಹುದು ಇಲ್ಲವೆ ಹಿಮ್ಮುಖವಾಗಿ ಚಾಚಿರುವ ಮುಳ್ಳುಗಳಿಂದ ಕೂಡಿರಬಹುದು. 

	ದೇಹದ ಮೂರನೆಯ ಭಾಗವಾದ ಪಿಜಿಡಿಯಮಿನ ಆಕಾರ ತ್ರಿಕೋನದಂತೆ ಇಲ್ಲವೆ ಅರ್ಧವೃತ್ತದಂತೆ. ಆದ್ಯ ಅವಸ್ಥೆಯಲ್ಲಿರುವ ಕೆಲವು ಜಾತಿಗಳಲ್ಲಿ ಪಿಜಿಡಿಯಮ್ ಭಾಗ ಇಲ್ಲವೇ ಇಲ್ಲ. ಕೆಲವು ಜಾತಿಗಳಲ್ಲಿ ಇದು ಬಹು ಚಿಕ್ಕದಾಗಿದೆ. ಹೆಚ್ಚು ವಿಕಾಸ ಹೊಂದಿದ ಜಾತಿಗಳಲ್ಲಿ ತಲೆಯಷ್ಟೇ ದೊಡ್ಡದಾಗಿದೆ. ಪಿಜಿಡಿಯಮಿನ ಹಿಂತುದಿ ಗುಂಡಾಗಿರಬಹುದು, ಮುಳ್ಳುಗಳಾಗಿ ಚಾಚಿರಬಹುದು ಅಥವಾ ಒಂದೇ ಒಂದು ದೊಡ್ಡ ಮುಳ್ಳಿನಂತೆ ಚಾಚಿಕೊಂಡಿರಬಹುದು.

	ತಲೆಯ ಕೆಳಭಾಗದಲ್ಲಿ ಬಾಯಿ ಉಂಟು. ಬಾಯಿಯ ಕೆಳಗೆ ಗುರಾಣಿ ಆಕಾರದ ಒಂದು ಫಲಕ ಇದೆ. ಇದಕ್ಕೆ ಹೈಪೊಸ್ಟೋಮ ಎಂದು ಹೆಸರು. ಅಲ್ಲದೆ ತಲೆಯ ಕೆಳಭಾಗದಲ್ಲಿ ಐದು ಜೊತೆ ಉಪಾಂಗಗಳೂ ಉಂಟು. ಮೊದಲನೆಯ ಜೊತೆ ಉಪಾಂಗಗಳು ದಾರದಂತೆ ಉದ್ದವಾಗಿವೆಯಲ್ಲದೆ ಅನೇಕ ಕೀಲುಗಳಿಂದ ಕೂಡಿವೆ. ಇವು ಸ್ಪರ್ಶಾಂಗಗಳು. ಉಳಿದ ನಾಲ್ಕು ಜೊತೆ ಉಪಾಂಗಗಳು, ಎದೆ ಮತ್ತು ಪಿಜಿಡಿಯಮ್ ಭಾಗಗಳಲ್ಲಿರುವ ಉಪಾಂಗಗಳ ರಚನೆಯನ್ನೇ ಪಡೆದಿವೆ. ಆದರೆ ಆಹಾರವನ್ನು ಕತ್ತರಿಸಲು ಮತ್ತು ಜಗಿಯಲು ಇವು ಸಹಾಯಕವಾಗಿವೆ.

	ಎದೆಯ ಪ್ರತಿಖಂಡದಲ್ಲೂ ಒಂದು ಜೊತೆ ಉಪಾಂಗಗಳುಂಟು. ತಲೆಯ ಕಡೆಗಿರುವ ಖಂಡಗಳ ಉಪಾಂಗಗಳು ಬಹು ಉದ್ದವಾಗಿವೆಯಾದರೆ ದೇಹದ ಹಿಂಭಾಗಕ್ಕೆ ಹೋದಂತೆಲ್ಲ ಕ್ರಮೇಣ ಚಿಕ್ಕದಾಗುತ್ತವೆ. ಪ್ರತಿಯೊಂದು ಉಪಾಂಗದಲ್ಲೂ ತಳ ಕೀಲು, ಒಳಕೀಲು ಮತ್ತು ಹೊರಕೀಲುಗಳುಂಟು. ಒಳಕೀಲು ಆರು ಚಿಕ್ಕಕೀಲುಗಳಿಂದ ರಚಿತವಾಗಿದೆ. ಇದು ಈಜಲು ಸಹಕಾರಿಯಾಗಿತ್ತೆಂದು ಹೇಳಲಾಗಿದೆ. ಹೊರಕೀಲಿನ ಹಿಂಭಾಗದಲ್ಲಿ ಬಿರುಗೂದಲುಗಳುಂಟು. ಹೊರಕೀಲುಗಳು ತೆವಳಲು ಸಹಕಾರಿಯಾದ್ದಿರಬಹುದು. ತಳಕೀಲುಗಳು ಒಂದರೊಳಗೊಂದು ಸೇರಿಕೊಂಡುರುವ ಆಲಿಕೆಗಳಂತಿವೆ. ಇಂಥ ರಚನೆಯನ್ನು ತೋರುವ ಅಂಗಕ್ಕೆ ಬಿರೇಮಸ್ ಉಪಾಂಗ ಎಂದು ಹೆಸರು. ಪಿಜಿಡಿಯಮಿನಲ್ಲಿಯೂ ಕೊನೆಯ ಖಂಡವನ್ನು ಬಿಟ್ಟು ಉಳಿದ ಖಂಡಗಳಲ್ಲಿ ತಲಾ ಒಂದು ಜೊತೆ ಉಪಾಂಗಗಳಿವೆ. ಇವು ಎದೆ ಭಾಗದ ಉಪಾಂಗಗಳನ್ನೇ ಹೋಲುವವಾದರೂ ಎಲೆಯಂತೆ ಅಗಲವಾಗಿದೆ. ದೇಹದ ಕೊನೆಯ ಖಂಡದಲ್ಲಿ ಗುದದ್ವಾರವುಂಟು. 

	ಗ್ಲಾಬೆಲದ ಆಕಾರ ಮತ್ತು ಅದರ ವಿಂಗಡಣೆ, ಒಳಕೆನ್ನೆ ಮತ್ತು ಹೊರಕೆನ್ನೆಗಳ ಪ್ರಮಾಣ ಮತ್ತು ಸೇರಿಕೆಯ ಸ್ಥಾನ, ಸಂಯುಕ್ತನೇತ್ರಗಳ ರೂಪ, ಎದೆಯ ಭಾಗಗಳ ಸಂಖ್ಯೆ ಮತ್ತು ಪಿಜಿಡಿಯಮಿನ ಗಾತ್ರ ಇವುಗಳ ತುಲನದಿಂದ ವಿವಿಧ ರೀತಿಯ ಟ್ರೈಲೊಬೈಟ್‍ಗಳ ವಿಕಾಸವನ್ನು ನಿರ್ಧರಿಸಬಹುದು.

	ಟ್ರೈಲೊಬೈಟ್‍ಗಳ ಸ್ಪರ್ಶಾಂಗ ಮತ್ತು ಇತರ ಉಪಾಂಗಗಳ ರಚನಾಕ್ರಮವು ಕ್ರಸ್ಟೇಸಿಯ ಗುಂಪಿನೊಡನೆ ಇವು ಹೊಂದಿರುವ ಸಂಬಂಧವನ್ನೂ ಎದೆ ಮತ್ತು ಪಿಜಿಡಿಯಮ್‍ಗಳ ಖಂಡಗಳ ಸಂಖ್ಯೆ ನಿಗದಿಯಾಗಿಲ್ಲದಿರುವುದು ಬ್ರಾಂಕಿಯಾಪೊಡಗಳಿಗೂ ಟ್ರೈಲೊಬೈಟ್‍ಗಳಿಗೂ ಇರಬಹುದಾದ ಬಾಂಧವ್ಯವನ್ನೂ ಸೂಚಿಸುತ್ತವೆ. ಆದರೆ ಈ ಪ್ರಾಣಿಗಳ ದೇಹ ಮೂರು ತೆವರುಗಳಾಗಿ ವಿಂಗಡಗೊಂಡಿರುವುದು, ಕೆನ್ನೆ ಭಾಗಗಳ ಸೇರಿಕೆ ಮತ್ತು ಪಿಜಿಡಿಯಮಿನ ಭಾಗಗಳು ಅಚಲವಾಗಿರುವಿಕೆ-ಇವು ಟ್ರೈಲೊಬೈಟ್‍ಗಳು, ಆತ್ರ್ರಾಪೊಡ ಪ್ರಾಣಿವರ್ಗದಲ್ಲೆಲ್ಲ, ಆದ್ಯ ಅವಸ್ಥೆಯಲ್ಲಿ ಇರುವ ಉಪವರ್ಗಕ್ಕೆ ಸೇರಿದ ಪ್ರಾಣಿಗಳು ಎಂದು ಸೂಚಿಸುತ್ತವೆ. 

	ವಿವಿಧ ಪ್ರಭೇದಗಳ ಬೆಳವಣಿಗೆಯ ಕ್ರಮವನ್ನೂ ಅಧ್ಯಯಿಸಲಾಗಿದೆ. ಡಿಂಬಗಳಲ್ಲಿ ತಲೆ ಮತ್ತು ಪಿಜಿಡಿಯಮಗಳ ಸೂಚನೆ ಮಾತ್ರ ಕಂಡುಬರುತ್ತದೆ. ತುಂಬ ಸೂಕ್ಷ್ಮಗಾತ್ರದ ಇವುಗಳಲ್ಲಿ ದೇಹದ ಹಿಂಭಾಗದಿಂದ ತೊಡಗಿ ಮುಂಭಾಗದೆಡೆ ಮುಂದುವರಿದು ಖಂಡಗಳು ಮೂಡುತ್ತ ಬರುವುವು.

	ಟ್ರೈಲೊಬೈಟುಗಳೆಲ್ಲವೂ ಸಾಗರವಾಸಿಗಳಾಗಿದ್ದುವು. ಇವುಗಳಲ್ಲಿ ಕೆಲವು ಸಮುದ್ರಗಳ ಮರಳು ಇಲ್ಲವೆ ಕೆಸರುಮಯ ತಳದ ಮೇಲೆ ಜೀವಿಸುತ್ತಿದ್ದುವಾದರೆ ಇನ್ನು ಕೆಲವು ಹವಳದಿಬ್ಬಗಳಲ್ಲೂ ಮತ್ತೆ ಕೆಲವು ಆಳಸಮುದ್ರಗಳಲ್ಲೂ ಜೀವಿಸುತ್ತಿದ್ದುವೆನ್ನಲಾಗಿದೆ. ಪ್ರಪಂಚಾದ್ಯಂತ ಇವು ವ್ಯಾಪಿಸಿದ್ದುವು. ಕೆಲವು ಕಡೆಗಳಲ್ಲಂತೂ ಇವು ಎಷ್ಟು ಹೇರಳಸಂಖ್ಯೆಯಲ್ಲಿದ್ದುವೆಂದರೆ ಅಂಥಲ್ಲಿನ ಶಿಲಾಸ್ತರಗಳೆಲ್ಲ ಇವುಗಳ ಅವಶೇಷಗಳಿಂದಲೇ ತುಂಬಿಹೋಗಿವೆ. ವಿಫುಲಸಂಖ್ಯೆಯ ಪ್ರಭೇದಗಳಿವೆ. ಇವುಗಳಲ್ಲಿ ಕೆಲವು ಕೇವಲ ¼" ನಷ್ಟಿದ್ದರೆ ಇನ್ನು ಕೆಲವು 27" ಉದ್ದವಿದ್ದವು. ಬಹುತೇಕ ಪ್ರಭೇದಗಳ ಉದ್ದ 1"-3"ನಷ್ಟಿತ್ತು. 
(ಡಿ.ಆರ್.; ಜಿ.ಎಸ್‍ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ